ಕಾರೆವ ಸ್ತರಗಳು

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಸಮುದ್ರಮಟ್ಟಕ್ಕಿಂತಲೂ ಸುಮಾರು 1,800 ಮೀಟರುಗಳಷ್ಟು ಎತ್ತರದಲ್ಲಿರುವ ಕಾಶ್ಮೀರ ಕಣಿವೆಯಲ್ಲಿನ ಸ್ತರಗಳು (ಕಾರೇವ ಬೆಡ್ಸ್). ಇವು ಭೂಚರಿತ್ರೆಯ ಪ್ಲಿಸ್ಟೋಸೀನ್ ಕಾಲದಲ್ಲಿ ಸರೋವರ, ನದಿ ಮತ್ತು ಹಿಮನದಿಗಳ ಕಾರ್ಯದಿಂದ ಶೇಖರವಾಗಿವೆಯೆಂದು ತಿಳಿದುಬಂದಿದೆ. ಈ ಸ್ತರಗಳಿಗೆ ಈಶಾನ್ಯದಲ್ಲಿ ಉನ್ನತ ಹಿಮಾಲಯ ಶ್ರೇಣಿಯೂ ನೈರುತ್ಯದಲ್ಲಿ ಪಿರ್ ಪಂಜಾಲ್ ಶ್ರೇಣಿಯೂ ಇವೆ. ಇವು ಕಾಶ್ಮೀರ ಕಣಿವೆಯಲ್ಲಿ ಸುಮಾರು 130 ಕಿಲೋಮೀಟರುಗಳಷ್ಟು  ಉದ್ದ ಮತ್ತು 30 ಕಿಲೋಮೀಟರುಗಳಷ್ಟು ಅಗಲವಿರುವ ಪ್ರದೇಶದಲ್ಲಿ ವ್ಯಾಪಿಸಿವೆ.

      ಕಾರೇವ ಸ್ತರಗಳು ಮುಖ್ಯವಾಗಿ ಸಣ್ಣಮರಳು ಮತ್ತು ನಯವಾದ ವರ್ಣರಂಜಿತ ಮಣ್ಣುಗಳಿಂದಾದ ಶಿಲೆಗಳಿಂದ ಉಂಟಾಗಿವೆ; ಮತ್ತು  ಇವುಗಳ ಜೊತೆಗೆ 1-2 ಮೀಟರು ದಪ್ಪದ ಉತ್ಕøಷ್ಠವಲ್ಲದ ಲಿಗ್ನೈಟ್ ಪದರಗಳೂ ಇವೆ. ಮೇಲೊತ್ತರಿಸಲ್ಪಡುತ್ತಿರುವ ಪರ್ವತಗಳ ಮದ್ಯದಲ್ಲಿ ಕುಸಿಯುತ್ತಿರುವತಳದಿಂದುಂಟಾದ ಸರೋವರದಲ್ಲಿ ಈ ಸ್ತರಗಳು ಶೇಖರವಾಗಿವೆಯೆಂದು ಶಿಲಾವಿಧಗಳ ಆಧಾರಗಳಿಂದ ಕಂಡು ಬರುತ್ತದೆ. ಇವು ಟ್ರಯಾಸಿಕ್ ಮತ್ತು ಅದಕ್ಕೂ ಪುರಾತನ ಶಿಲೆಗಳ ಮೇಲೆ ಶೇಖರವಾಗಿರುವುದನ್ನು ಕಾಣಬಹುದು. ಈ ಸ್ತರಗಳ ಅವಶೇಷಗಳು  ಪಿರ್ ಪಂಜಾಲ್ ಶ್ರೇಣಿಯ ಈಶಾನ್ಯಭಾಗದ ಇಳಿಜಾರಿನಲ್ಲಿ ಸಮುದ್ರಮಟ್ಟಕ್ಕಿಂತ ಸುಮಾರು 3700ರಿಂದ 4,000 ಮೀಟರುಗಳಷ್ಟು ಎತ್ತರ ಪ್ರದೇಶಗಳಲ್ಲೂ ಕಂಡುಬಂದಿವೆ.

    ಕಾರೇವ ಸ್ತರಗಳನ್ನು ಕೆಳವಿಭಾಗ ಮತ್ತು ಮೇಲು ವಿಭಾಗವೆಂದು ಭಾಗಿಸಬಹುದು. ಕೆಳಸ್ತರಗಳಲ್ಲಿ ಮಡಿಕೆಗಳುಂಟಾಗಿವೆ. ಆದರೆ ಅದೇ ಮೇಲುಸ್ತರಗಳು ಹೆಚ್ಚು ಕಡಿಮೆ ಸಮುದ್ರಮಟ್ಟದಲ್ಲೇ ಇವೆ. ಕೆಳ ಕಾರೇವಾದ ಕೆಳಗಿನ ಸುಮಾರು 900 ಮೀಟರುಗಳಷ್ಟು ಸ್ತರಗಳು ನದಿ ಮತ್ತು ಹಿಮನದಿಗಳಿಂದ ಮೊದಲನೇ ನೀರ್ಗಲ್ಲು ಯುಗಕ್ಕೂ ಮೊದಲು ಶೇಖರವಾದವೆಂದು ನಂಬಬಹುದು. ಅದೇ ಕೆಳ ಕಾರೇವಾದ ಮೇಲಿನ ಸ್ತರಗಳು ಮೊದಲನೆಯ ಮತ್ತು ಎರಡನೆಯ ನೀರ್ಗಲ್ಲು ಯುಗದ ಅಂತರ ಅವಧಿಯಲ್ಲಿ ಶೇಖರವಾಗಿರುವುದಾಗಿ ತಿಳಿದುಬರುತ್ತದೆ. ಈ ಕೆಳ ವಿಭಾಗದ ಮೇಲಿನ ಸ್ತರಗಳಲ್ಲಿ ಸುಮಾರು 70 ವಿಧದ ಸಸ್ಯಾವಶೇಷಗಳು ಸಿಕ್ಕಿವೆ. ಇವುಗಳಲ್ಲಿ ದ್ವಿದಳಬೀಜದ ಗುಂಪಿಗೆ ಸೇರಿದಂಥವೇ ಹೆಚ್ಚು. ಈ ಸಸ್ಯಾವಶೇಷಗಳು ಸಾಮಾನ್ಯವಾಗಿ ಉಷ್ಣ ಮತ್ತು ಸಮಶೀತೋಷ್ಣ ವಾಯುಗುಣವನ್ನು ಸೂಚಿಸುವಂಥವು. ಈಗಿನ ಕಾಲದಲ್ಲಿ ಸಮುದ್ರಮಟ್ಟಕ್ಕೆ 1,700 ಮೀಟರುಳಷ್ಟು ಮೀರದ ಎತ್ತರವಿರುವ ಪ್ರದೇಶದಲ್ಲಿ ಮಾತ್ರ ಈ ಸಸ್ಯಗಳು ಬೆಳೆಯುತ್ತವೆ. ಆದರೆ ಇವುಗಳ ಅವಶೇಷಗಳು ಸಮುದ್ರಮಟ್ಟಕ್ಕಿಂತ ಸುಮಾರು 3,500 ಮೀಟರುಗಳಷ್ಟು ಎತ್ತರವಿರುವ ಈ ಸ್ತರಗಳಲ್ಲಿ ಕಂಡುಬಂದಿವೆ. ಆದ್ದರಿಂದ ಕಾರೇವ ಸ್ತರಗಳು ಶೇಖರವಾದ ಅನಂತರ ಅವು ಮೇಲೊತ್ತರಿಸಿವೆ ಎಂದು ತಿಳಿಯುವುದು. ಈ ಸಸ್ಯಾವಶೇಷಗಳಲ್ಲದೆ ಮೀನು, ಆನೆ, ಕುದುರೆ, ದನ, ಹಂದಿ ಮತ್ತು ರೈನಾಸೆರಸ್‍ಗಳ ಗುಂಪಿಗೆ ಸೇರಿದ ಅನೇಕ ಪ್ರಾಣಿಗಳ ಅವಶೇಷಗಳೂ ಈ ಸ್ತರಗಳಲ್ಲಿ ಕಂಡುಬಂದಿವೆ. ಕಾರೇವ ಮೇಲ್ವಿಭಾಗ ಸುಮಾರು 350 ಮೀ.ಗಳಷ್ಟು ದಪ್ಪಸ್ತರಗಳನ್ನೊಳಗೊಂಡಿದೆ. ಇವುಗಳಲ್ಲೂ ಬೆನ್ನೆಲುಬಿಲ್ಲದ ಪ್ರಾಣಿಗಳ ಮತ್ತು ಸಸ್ಯಗಳ ಅವಶೇಷಗಳು ಇವೆ. 

 ಕಾರೇವಸ್ತರಗಳ  ಕೆಳವಿಭಾಗವನ್ನು ಪ್ರಾಣಿ ಅವಶೇಷಗಳ ಆಧಾರದ ಮೇಲೆ ಶಿವಾಲಿಕ್ ಯುಗದ ಪಿಂಜೊರ್  ಅವಧಿಯ ಸಮಕಾಲೀನವೆಂದು ಪರಿಗಣಿಸಲಾಗಿದೆ. ಕಾರೇವ ಸ್ತರಗಳನ್ನೊಂಡಿರುವ ಪಿರ್‍ಂಪಜಾಲ್ ಶ್ರೇಣಿಯ ಕೊನೆಯ ಮೇಲೊತ್ತರಿಸುವಿಕೆ ಕಾರೇವ ಶೇಖರಾಂತರವೆಂದೂ ಆ ಅವಧಿಯಲ್ಲಿ ಆಗಲೇ ಆದಿಮಾನವ ಕಾಣಿಸಿಕೊಂಡಿದ್ದನೆಂದೂ ನಂಬಲಾಗಿದೆ. ಆದರೆ ಇದುವರೆಗೂ ಕಾರೇವ ಸ್ತರಗಳಲ್ಲಿ ಆದಿಮಾನವನ ಜೀವಾವಶೇಷಗಳೂ ಸಿಕಿಲ್ಲ.

 

(ಎಂ.ವಿ.ಎ.ಎಸ್.)